ಮನದ ಮಾತು
ಕವನವಾಗಿಳಿದಿಹುದು
ಸೆರೆಯಾದ ನೆನಪಿಂದು ಹರಿಯುತಿಹುದು |
ಮೊದಲ ಬಾರಿಗೆ ಕಂಡ
ನೀಲಿ ಅಂಗಿಯ ಹುಡುಗ
ಮನಸಿನಂಚಲಿ ಈ ಚಿತ್ರ ಮಾಸದಿಹುದು ||
ನನ್ನೆದುರು ಕುಳಿತಿದ್ದ
ಚಿಗುರು ಮೀಸೆಯ ಮೊಗದ
ಅಚ್ಚಳಿಯದೀ ನೆನಪು ಹಚ್ಚ ಹಸಿರು |
ಅಂದು ಅರಿತಿರಲಿಲ್ಲ
ನೀವೆ ಆಗುವಿರೆಂದು
ಜೀವನದ ಸಂಗಾತಿ, ನನ್ನ ಉಸಿರು ||
ಭಾವ ತುಂಬಿದ ಕಣ್ಣ
ಮುಚ್ಚಿದೊಡೆ ಕಾಣುವುದು
ಹೃದಯದಾಳದಿ ನಗುವ ನಿಮ್ಮದೇ ಕನಸು |
ಮಾಧುರ್ಯದ ಹೊಳೆ ಹರಿಸಿ
ಭಾವನೆಗಳನುಕ್ಕಿಸುತ
ಚೈತನ್ಯವೀಯುವುದು ನಿಮ್ಮ ಸೊಗಸು ||
ಒಲುಮೆ ತುಂಬಿದ ನೋಟ
ಸಂಗಾತಿಯ ನಲ್ಮೆ ನುಡಿ
ಎಬ್ಬಿಸಿದೆ ಪ್ರೀತಿಯನು ನನ್ನೊಳಗಿನಿಂದ |
ಹುದುಗಿದ್ದ ಒರತೆಯಿದು
ಅನುದಿನವು ಚಿಮ್ಮುತಿದೆ
ಸನಿಹದಲಿ ಉಳಿವಾಸೆ ಮನದಾಳದಿಂದ ||
ಸ್ನೇಹದಾ ಸವಿ ಜೇನು
ಅಮೃತದ ಸಿಂಚನವು
ಚಿತ್ತ ತುಂಬಿದೆ ನಿಮ್ಮ ಪ್ರೀತಿಯಲ್ಲಿ |
ಮಧುರ ಬಂಧವ ಬೆಸೆವ
ಅನುರಾಗದ ಚಿಲುಮೆಯಿದು
ಎನ್ನೆದೆಯ ಬಿಸುಪಿನೊಳು ಬತ್ತದಿರಲಿ ||
1 comment:
Kavana bhari laikithu. Aanu inde noodiddu.
Cikkayya
Post a Comment