Tuesday, December 13, 2011

ಮನದ ಮಾತು


ಮನದ ಮಾತು 

ಮನವಿಂದು ಕರಗಿಹುದು
ಕವನವಾಗಿಳಿದಿಹುದು
ಸೆರೆಯಾದ ನೆನಪಿಂದು ಹರಿಯುತಿಹುದು |
ಮೊದಲ ಬಾರಿಗೆ ಕಂಡ 
ನೀಲಿ ಅಂಗಿಯ ಹುಡುಗ
ಮನಸಿನಂಚಲಿ ಈ ಚಿತ್ರ ಮಾಸದಿಹುದು ||

ನನ್ನೆದುರು ಕುಳಿತಿದ್ದ 
ಚಿಗುರು ಮೀಸೆಯ ಮೊಗದ
ಅಚ್ಚಳಿಯದೀ ನೆನಪು ಹಚ್ಚ ಹಸಿರು |
ಅಂದು ಅರಿತಿರಲಿಲ್ಲ 
ನೀವೆ ಆಗುವಿರೆಂದು 
ಜೀವನದ ಸಂಗಾತಿ, ನನ್ನ ಉಸಿರು ||

ಭಾವ ತುಂಬಿದ ಕಣ್ಣ 
ಮುಚ್ಚಿದೊಡೆ ಕಾಣುವುದು 
ಹೃದಯದಾಳದಿ ನಗುವ ನಿಮ್ಮದೇ ಕನಸು |
ಮಾಧುರ್ಯದ ಹೊಳೆ ಹರಿಸಿ
ಭಾವನೆಗಳನುಕ್ಕಿಸುತ
ಚೈತನ್ಯವೀಯುವುದು ನಿಮ್ಮ ಸೊಗಸು ||

ಒಲುಮೆ ತುಂಬಿದ ನೋಟ 
ಸಂಗಾತಿಯ ನಲ್ಮೆ ನುಡಿ
ಎಬ್ಬಿಸಿದೆ ಪ್ರೀತಿಯನು ನನ್ನೊಳಗಿನಿಂದ |
ಹುದುಗಿದ್ದ ಒರತೆಯಿದು
ಅನುದಿನವು ಚಿಮ್ಮುತಿದೆ
ಸನಿಹದಲಿ ಉಳಿವಾಸೆ ಮನದಾಳದಿಂದ ||

ಸ್ನೇಹದಾ ಸವಿ ಜೇನು 
ಅಮೃತದ ಸಿಂಚನವು
ಚಿತ್ತ ತುಂಬಿದೆ ನಿಮ್ಮ ಪ್ರೀತಿಯಲ್ಲಿ |
ಮಧುರ ಬಂಧವ ಬೆಸೆವ 
ಅನುರಾಗದ ಚಿಲುಮೆಯಿದು
ಎನ್ನೆದೆಯ ಬಿಸುಪಿನೊಳು ಬತ್ತದಿರಲಿ ||